ಇಂದೂ ಸಹ ಕಾಲೇಜಿಗೆ ರಜ. ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯೊಬ್ಬಳಿಗೆ ವಿಷೇಷ ಕಿರು ಪರೀಕ್ಷೆ ನಡೆಸಿದೆ. ಗೋವಿಂದರಾಜು-ಜ್ಯೋತಿನಿವಾಸ್ ಕಾಲೇಜಿನ ಎಕ್ಸಾಮ್ ಕಂಟ್ರೋಲರ್ ಬಂದಿದ್ದರು. 7 ಪೇಪರ್ ಮೌಲ್ಯಮಾಪನ ಮಾದಿಕೊಟ್ಟೆ. ಸಂಜೆ ಸುತ್ತಾಟ ಅಷ್ಟೇ.
ನಿನ್ನೆ ಭರ್ತಿ ಕೆಲಸ. ಡಾ.ಎಚ್.ಎನ್ ನೆನಪಿನ 5 ನೇ ಅಂತರ ಕಾಲೇಜು ನಾಟಕ ಸ್ಪರ್ಧೆ ಮತ್ತು 49 ನೇ ಅಂತರ್ ವರ್ಗೀಯ ನಾಟಕ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ಮಧ್ಯಾಹ್ನ 3.35 ಕ್ಕೆ ಪ್ರಾರಂಭವಾಯಿತು. ಮುಖ್ಯ ಅತಿಥಿಗಳು ಚಿದಂಬರರಾವ್ ಜಂಬೆ. ಅಧ್ಯಕ್ಷತೆ.
ಡಾ.ಎ.ಎಚ್.ರಾಮರಾವ್, ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರುತ್ತಾ ನಾಟಕ ಸ್ಪರ್ಧೆ ನಡೆಸುವ ಕಷ್ಟ ಕುರಿತು ಹೇಳಿದರು. ಶಾಲಾಕಾಲೇಜುಗಳಲ್ಲಿ ನಾಟಕ ಆಡಿಸುವುದರ ಮಹತ್ವವನ್ನು ಕುರಿತು ಮಾತನಾಡಿದರು. ನಮ್ಮ ಕಾಲೇಜಿನಲ್ಲಿ 1962 ರಿಂದ ನಿರಂತರವಾಗಿ ಅಂತರ್ ವರ್ಗೀಯ ನಾಟಕಸ್ಪರ್ಧೆ ನಡೆಸುತ್ತಾ ಬಂದಿದ್ದೇವೆ. ಇದು ಒಂದು ಸಾಧನೆ ಎಂದರು.
ಮುಖ್ಯ ಅತಿಥಿಗಳಾದ ಚಿದಂಬರರಾವ್ ಜಂಬೆ ಅವರು ಮಾತನಾಡುತ್ತಾ ರಂಗಭೂಮಿಗೆ ಯುವಕರೆಲ್ಲ ಬಂದು ಸೇರುವ ದಾರಿಯೇ ಶಾಲಾಕಾಲೇಜುಗಳಲ್ಲಿನ ರಂಗ ಚಟುವಟಿಕೆಗಳು. ಇವುಗಳು ವ್ಯಕ್ತಿತ್ವ ವಿಕಸನದ ದಾರಿ. ವಿದ್ಯಾರ್ಥಿಗಳಿಗೆ ಧೈರ್ಯ ಮತ್ತು ಸಾಹಸವನ್ನು ತುಂಬಿಕೊಡುವುದು, ಮುನ್ನುಗ್ಗಿ ಕೆಲಸ ಮಾಡುವುದನ್ನು ಕಲಿಸುವುದು, ನಾಯಕತ್ವದ ಟ್ರೈನಿಂಗ್ ಸಿಗುವುದು ಇಲ್ಲಿಯೇ. ಇದು ಒಂದು ಗುಂಪು ಚಟುವಟಿಕೆ. ಗುಂಪಿನಲ್ಲಿ ಕೆಲಸ ಮಾಡಿದವರಿಗೆ ಮಾನಸಿಕ ದೃಢತೆ ಹೆಚ್ಚುವುದು. ಅಹಂಕಾರ ಅಳಿಯುವುದು. ಇದು ಎಲ್ಲ ಕಲೆಗಳನ್ನೂ ಮೇಳೈಸಿದ ಸಮ್ಯಗ್ ದರ್ಶನ. ಇಲ್ಲಿ ಉಳಿದೆಲ್ಲ ಕಲೆಗಳೂ ತಮ್ಮ ಅಹಂಕಾರವನ್ನು ಕಳೆದುಕೊಂಡು ಒಟ್ಟಾಗಿ ಒಂದು ರಸಾನುಭವಕ್ಕೆ ದುಡಿಯುತ್ತದೆ. ಇಂತಹ ಅನುಭವಕ್ಕೆ ನೀವೆಲ್ಲರೂ ನಿಮ್ಮನ್ನು ಕೊಟ್ಟುಕೊಂಡಿದ್ದೀರಿ, ನಿಮಗೆ ಅಭಿನಂದನೆಗಳು. ಎಂದರು. ನಂತರ ಪ್ರಮುಖ ಕವಿಗಳ ನಾಲ್ಕಾರು ಕವನಗಳನ್ನು ವಾಚಿಸಿ ರಂಜಿಸಿದರು.
ಶ್ರೀಮತಿ ಮೀತ ಮಿಶ್ರ ಅವರು ಅಂತರ ಕಾಲೇಜು ನಾಟಕಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.
ಶ್ರೀ ರಾಜ್ ಕುಮಾರ್ ಅವರು ಅಂತರ ತರಗತಿ ನಾಟಕಸ್ಪರ್ಧೆಯ ತೀರ್ಪುಗಾರರಾಗಿ ಮಾತನಾಡಿದರು.
ಮೊದಲಿಗೆ ಅಂತರ ಕಾಲೇಜು ನಾಟಕ ಸ್ಪರ್ಧೆಯ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು.
ನಂತರ- ಅಂತರ ತರಗತಿ ನಾಟಕ ಸ್ಪರ್ಧೆಯ ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು.
ಡಾ.ಎಂ.ಲೀಲಾವತಿ ಪ್ರಾಂಶುಪಾಲರು, ವಂದನಾರ್ಪಣೆ ಮಾಡಿದರು.
Filed under: ಪ್ರತಿ ದಿನದ ಬವಣೆಗಳ ಬಣವೆ | Leave a Comment
ರಾಜ್ಯೋತ್ಸವದ ದಿನ. ಇಂದೂ ಕೂಡಾ ಎಲ್ಲ ಅಧ್ಯಾಪಕರು ಕಾಲೇಜಿಗೆ ಬಂದು ಕನ್ನಡ ದಿನವನ್ನು ಆಚರಿಸಬೇಕು. ಯಾರಿಗೂ ಅದು ಬೇಕಿಲ್ಲ.
ಚಿದಂಬರರಾವ ಜಂಬೆ ಜೊತೆ ಒಂದು ಚರ್ಚೆ ಇದೆ. ಉತ್ತರರಾಮ ಚರಿತದ ಬಗ್ಗೆ ಮಾತನಾಡಬೇಕು. ಬನ್ನಿ ಎಂದಿದ್ದಾರೆ.
ಮಧ್ಯಾಹ್ನ 12 ರಿಂದ 1.30 ರವರೆಗೆ ಭವಭೂತಿಯ ಉತ್ತರ ರಾಮಚರಿತ ನಾಟಕದ ಬಗೆಗೆ ಚರ್ಚೆ ಮಾಡಿದ್ವಿ. ನಾಟಕದ ಹೊಸ ಓದು ಏನಾಗಬಹುದು. ಜಂಬೆ ಕೂಡಾ ತುಂಬಾ ಅತ್ಯುತ್ತಮವಾದ ಒಳನೋಟಗಳನ್ನು ಕೊಟ್ಟರು.
ರಾಮಾಯಣದ ಕಥೆಯನ್ನುಕುರಿತಂತೆ ವಿಚಾರ ಮಾಡುತ್ತಾ ನನಗೆ ಅನ್ನಿಸಿದ್ದು:-
ರಾಮ ಶಿವಧನುಸ್ಸನ್ನು ಮುರಿದು ಸೀತೆಯನ್ನು ಹೆಂಡತಿಯಾಗಿ ಪಡೆದುಕೊಂಡ. ಅದೇ ಸೀತೆಯನ್ನು ತಾನುಉಳಿಸಿಕೊಳ್ಳಲು ಧನುಸ್ಸನ್ನು ನಿರಂತರವಾಗಿ ಹಿಡಿಯಬೇಕಾಯ್ತು. ಧನುಸ್ಸು ನಾಶಗೊಳಿಸುವುದರ ಸಂಕೇತವೂ, ಸಾಮ್ರಾಜ್ಯ ವಿಸ್ತರಣೆಯ ಸಂಕೇತವೊ ಆಗಿರುತ್ತದೆ. ಧನುಸ್ಸನ್ನು ಮುರಿಯುವುದು ಎಂದರೆ ಸಾಮ್ರಾಜ್ಯ ವಿಸ್ತರಣೆ ಎಂಬ ಮಾನವ ಕುಲದ ವಿನಾಶವನ್ನು ಮುರಿಯುವುದು ಎಂದೂ ಆಗುತ್ತದೆ. ಜನಕ ಮಹಾರಾಜ ರಾಮನಿಗೆ ಒಡ್ಡಿದ ಪಣ ಶಿವಧನುಸ್ಸನ್ನು ಎತ್ತಿ ಬಳಸುವುದು. ಆದರೆ ರಾಮ ಅದನ್ನು ಸಲೀಸಾಗಿ ಎತ್ತುವುದಷ್ಟೇ ಅಲ್ಲ – ಮುರಿಯುತ್ತಾನೆ. ಇದು ಬಹುಷಃ ವಿನಾಶಕಾರಿಯಾದ ಅಸ್ತ್ರದ ನಾಶಗೊಳಿಸುವುದು, ತನ್ಮೂಲಕ ಶಾಂತಿಯನ್ನು ಪ್ರತಿನಿಧಿಸುವುದು ಎಂಬ ಸಂಕೇತ-ಅರ್ಥವನ್ನೂ ಪಡೆಯಬಹುದು.
ಸೀತೆಯನ್ನು ಗಳಿಸಿಕೊಳ್ಳುವುದು ಅಂದರೆ, ಸೀತೆಯ ಹುಟ್ಟಿದ ಹಿನ್ನೆಲೆಯಲ್ಲಿ ನೇಗಿಲಿನ ಸೀಳಿನಲ್ಲಿ ಭೂಮಿಯ ಗರ್ಭದಿಂದ ಬಂದವಳು ಎಂಬುದನ್ನು ಪ್ರತಿಮೆಯನ್ನಾಗಿ ಸ್ವೀಕರಿಸಿದರೆ, ಕೃಷಿಯ ಮೂಲಕ ರಾಷ್ಟ್ರದ ಅಭಿವೃದ್ಧಿಯನ್ನು ಗೆಲ್ಲುವುದು ಎಂಬ ಅರ್ಥವನ್ನು ಪಡೆಯಬಹುದು.
ಈ ಹಂತದಲ್ಲಿ ಬಿಲ್ಲನ್ನು ಮುರಿಯುವುದು, ವಿನಾಶಕಾರಿಯನ್ನು ಕೊನೆಗಾಣಿಸುವುದು, ಸೀತೆಯನ್ನು ಪಡೆಯುವುದು ಅಭಿವೃದ್ಧಿಯನ್ನು ಗಳಿಸುವುದು ಎಂದಾಗುತ್ತದೆ.
ಸಾಮ್ರಾಜ್ಯ ವಿಸ್ತರಣೆಯ (ಯುದ್ಧ) ಬಯಕೆಯನ್ನು ಮುರಿದು, ಪ್ರಜೆಗಳ ಕ್ಷೇಮವೆಂಬ ಕೃಷಿ ಮೂಲ ಅಭಿವ್ರುದ್ಧಿಯನ್ನು ವಿಸ್ತರಿಸುವುದು ಎಂಬ ಅರ್ಥವಿಸ್ತರಣೆ ದೊರೆಯುತ್ತದೆ. ಈ ಸಂಕೇತವನ್ನು ಪಡೆದರೆ ಕಥೆಯ ಮುಂದುವರಿಕೆಯಲ್ಲಿ ಬೇರೆಯದೇಆದ ನೋಟವಿದೆ, ಕಥೆಯ ನಿರ್ವಚನೆಯೇ ಬೇರಿಯದಾಗಿದೆ.
ಹೀಗೆ ಬಿಲ್ಲು ಮುರಿದು, ಕೃಷಿಯನ್ನು ಪಡೆದು ಬಂದ ರಾಜಾ ರಾಮನು ತನ್ನ ಹೆಂಡತಿ (ಪ್ರಜೆಗಳ ಕ್ಷೇಮಾಭಿವೃದ್ಧಿ) ಯನ್ನು ರಕ್ಷಿಸಲು ಬಿಲ್ಲನ್ನು ನಿರಂತರವಾಗಿ ಬಳಸುವ ಒತ್ತಡವಿದೆ.
ಇಡೀ ರಾಮಾಯಣದ ಕಥೆಯನ್ನು ಬಿಲ್ಲನ್ನು ಮುರಿದವನು ಬಿಲ್ಲನ್ನೇ ಹಿಡಿದ ಕಥೆಯಾಗಿ ಕಾಣಬಹುದು.
ಜಂಬೆ ಅವರು ಹೇಳಿದ ಇನ್ನೊಂದು ಕಥೆ (ಜಾನಪದ ಮೂಲದ)ತುಂಬ ಆಸಕ್ತಿದಾಯಕವಾಗಿದೆ ಅನ್ನಿಸ್ತು.
ರಾವಣ ಸಂಹಾರ ಮಾಡಲು ರಾಮನು ಒಂದು ಯಾಗವನ್ನುಮಾಡ ಬಯಸುತ್ತಾನೆ. ಅದನ್ನು ಮಾಡಿಸುವ ಯೋಗ್ಯತೆಯುಳ್ಳ ಬ್ರಾಹ್ಮಣರನ್ನು ಕರೆತರಲು ಹನುಮಂತನಿಗೆ ಒಪ್ಪಿಸುತ್ತಾನೆ. ಬ್ರಾಹ್ಮಣರನ್ನು ಹುಡುಕಿ ಬಂದ ಹನುಮಂತನು ಸುತ್ತಮುತ್ತಲೂ ಯಾವ ಬ್ರಾಹ್ಮಣರೂ ದೊರೆಯಲಿಲ್ಲ, ರಾವಣನೇ ಈ ಯಾಗ ಮಾಡಿಸಲು ತಕ್ಕ ಬ್ರಾಹ್ಮಣ ಎಂದು ಹೇಳುತ್ತಾನೆ. ಹಾಗೆ ರಾವಣನಿಗೆ ಯಾಗ ಮಾಡಿಸಲು ಕರೆ ಹೋಗುತ್ತದೆ. ರಾವಣ ಯಾಗಮಾಡಿಸಲು ಒಪ್ಪುತ್ತಾನೆ. ಆದರೆ ಒಂದು ತೊಂದರೆ ಎದುರಾಗುತ್ತದೆ. ಯಾಗ ಮಾಡುವವನು ಹೆಂಡತಿಯೊಂದಿಗಿರಬೇಕಾಗುತ್ತದೆ. ಆದರೆ ರಾಮನ ಹೆಂಡತಿ ರಾವಣನ ವಶದಲ್ಲಿದ್ದಾಳೆ. ಈಗ ರಾಮ ರಾವಣ ಒಂದು ಒಪ್ಪಂದಕ್ಕೆ ಬರುತ್ತಾರೆ. ಯಾಗದ ಕಾರಣ ರಾವಣ ಸೀತೆಯನ್ನು ರಾಮನಿಗೊಪ್ಪಿಸುವುದು, ಹಾಗೆ ಯಾಗ ಮುಗಿದ ಮೇಲೆ, ಸೀತೆಯನ್ನು ಮತ್ತೆ ಅಶೋಕವನಕ್ಕೆ ಸೇರಿಸುವುದು ರಾಮನ ಕರ್ತವ್ಯವಾಗಿರುತ್ತದೆ. ಇದಕ್ಕೆ ರಾಮನು ಒಪ್ಪುತ್ತಾನೆ. ಯಾಗ ಮುಗಿದು ರಾಮ ರಾವಣರು ಯುದ್ಧ ಸನ್ನದ್ಧರಾಗುತ್ತಾರೆ.
ರಾವಣನು ತನ್ನ ಹತ್ಯೆ ಮಾಡಲಾಗುವ ಯಾಗವನ್ನು ತಾನೇ ಮಾಡಿಸುವುದು, ತನ್ನ ವಶದಲ್ಲಿದ್ದ ಸೀತೆಯನ್ನು ಯಾಗದ ನಿಮಿತ್ತ ಕೊಟ್ಟು ಮತ್ತೆ ಪಡೆಯುವುದು, ಹೀಗೆ ಪಡೆದ ಸೀತೆಯನ್ನು ಮತ್ತೆ ರಾವಣನ ಅಶೋಕವನಕ್ಕೆ ಒಪ್ಪಿಸುವುದು- ಈ ಕಥೆಯಲ್ಲಿನ ವಿಸ್ಮಯಕಾರೀ ಅಂಶಗಳು. ಜಾನಪದರಲ್ಲಿ ಇಂಥಹ ಕಲ್ಪನೆಗಳು ಹೇರಳವಾಗಿರುತ್ತವೆ.
ಧರ್ಮ ಮಾರ್ಗ ಎಂದರೆ ಏನೆಂಬುದನ್ನು ಈ ಕಥೆಯಿಂದ ಅರ್ಥಮಾಡಿಕೊಳ್ಳಬಹುದು.
Filed under: ಪ್ರತಿ ದಿನದ ಬವಣೆಗಳ ಬಣವೆ | Leave a Comment
ಇವತ್ತು BHEL ಪರೀಕ್ಷೆ.
ಇಂದು ಸಂಜೆ ರಂಗಶಂಕರದಲ್ಲಿ ಕೇರಳದ ನಟನ ಕೈರಾಲಿ ಅಭಿನಯಿಸಿದ ಅಭಿಜ್ಞಾನ ಶಾಕುಂತಲಂ ನಾಟಕ. ಗೋಪಾಲ್ ವೇಣು ನಿರ್ದೇಶನ ಕೂಡಿಯಾಟ್ಟಂ ಸಂಪ್ರದಾಯದ ಈ ಪ್ರದರ್ಶನದಲ್ಲಿ 4-5-6 ಅಂಕಗಳ ಭಾಗಗಳನ್ನು ಅಭಿನಯಿಸಿದರು. ಕಣ್ವನ ಪಾತ್ರಧಾರಿ, ಶಕುಂತಲೆಯ ಪಾತ್ರಧಾರಿ, ದುಷ್ಯಂತನ ಪಾತ್ರಧಾರಿ, ಧೀವರನ ಪಾತ್ರಧಾರಿಗಳು ಮುಖಭಾವಾಭಿನಯದಲ್ಲಿ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದರು. ಕೂಡಿಯಾಟ್ಟಂ ನ ಪ್ರಮುಖ ಆಕರ್ಷಣೆ ಅದರ ವಸ್ತ್ರಾಲಂಕಾರ. ಎರಡನೆಯದು ಕಣ್ಣು, ಹುಬ್ಬು, ಕಪೋಲಗಳನ್ನು ಅಲುಗಿಸುವುದರ ಮೂಲಕ ಭಾಆಭಿನಯ, ಹಸ್ತ ಮುದ್ರೆಗಳು, ಕೈಯ ಲಲಿತ ಚಲನೆಗಳು. ದೇಹದ ಇನ್ನಾವುದೇ ಭಾಗಗಳನ್ನು ಅಲುಗಿಸದೇ ದೊರಕಿಸಿಕೊಡುವ ಭಾವೋತ್ಪ್ರೇಕ್ಷೆ ಅನನ್ಯವಾದುದು.
ಕಾಲೇಜಿನ ಬ್ಲಾಗ್ ನ ಕೆಲಸಕ್ಕೆ ಇನ್ನೂ ದೊರೆಯಬೇಕಾದ ಗೌರವ ದೊರೆಯುತ್ತಿಲ್ಲ. ಕಾಲೇಜಿನ ಎಲ್ಲ ಅಧ್ಯಾಪಕರೂ ದಿನನಿತ್ಯ ನೋಡಲೇಬೇಕಾದ ಅಗತ್ಯ ಇದೆ. ಕಾಲೇಜಿನಲ್ಲಿ ನಡೆಯುವ ಎಲ್ಲವನ್ನೂ ಸುದ್ದಿ, ಕಾರ್ಯ, ರಿಪೋರ್ಟ್, ಅಭಿಪ್ರಾಯಗಳನ್ನು ಇಲ್ಲಿ ತುಂಬಿಸಬೇಕಾಗಿದೆ. ನಮ್ಮ ಕಾಲೇಜಿನಲ್ಲಿ ಹೆಚ್ಚು ಮಂದಿ ಅಧ್ಯಾಪಕರಿಗೆ ಕಾಲೇಜಿನಲ್ಲಿ ಪಾಠಮಾಡುವುದನ್ನು ಹೊರತು ಪಡಿಸಿದರೆ ಕಾಲೇಜಿನ ಕಾರ್ಯರೂಪವನ್ನು ಕುರಿತಂತೆ ಯಾವ ಅಭಿಪ್ರಾಯವನ್ನೂ ಹೊಂದಿಲ್ಲ. ತಾವಾಗಿಯೇ ಮುಂದುವರೆದು, ಹುಡುಕಿಕೊಂಡು, ಕಾಲೇಜಿನ ಔನ್ನತ್ಯಕ್ಕೆ ಕೆಲಸ ಮಾಡುತ್ತಿಲ್ಲ. ಕೊಟ್ಟ ಕೆಲಸವನ್ನೂ ಅಚ್ಚಿಕಟ್ಟಾಗಿ, ತಪ್ಪಿಲ್ಲದಂತೆ ಮಾಡುತ್ತಿಲ್ಲ. ತಮಗೆ ದೊರೆಯುವ- ಸಂಬಳ, ಡಿ.ಎ ಹೆಚ್ಚಳ, ಇತರೆ ಭತ್ಯೆ ಹೆಚ್ಚಳ ಮುಂತಾದವುಗಳು ಎಲ್ಲ ನೌಕರರೂ ಎಲ್ಲ ಕಡೆಯಲ್ಲೂ ಮಾತನಾಡಿಕೊಳ್ಳುವ ತಮ್ಮ ಅಭಿಪ್ರಾಯವನ್ನು ಇತರರಿಗೆ ತಿಳಿಸುವ ಅಭ್ಯಾಸದಲ್ಲಿರುತ್ತಾರೆ. ಇದನ್ನು ಹೊರತಾಗಿಯೂ ಒಂದು ಕಾಲೇಜಿನಲ್ಲಿ ಜವಾಬ್ದಾರಿಯುತ ಅಧ್ಯಾಪಕನೊಬ್ಬ ಕಾಲೇಜಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ತನ್ನ ಚಟುವಟಿಕೆಯ ವೃತ್ತದೊಳಗೇ ಅಪಾರವಾಗಿ ಕೆಲಸ ಮಾಡಬಹುದು. ನೂರಕ್ಕೆ ತೊಂಭತ್ತೊಂಭತ್ತು ಜನ ಇದರಿಂದ ವಿಮುಖರಾಗಿದ್ದಾರೆ. ಮುಂದಾಳುಗಳಲ್ಲಿಯೇ ಇಂಗಿತವಿಲ್ಲದಿದ್ದ ಮೇಲೆ ಇನ್ನು ಅನುಯಾಯಿಗಳಲ್ಲಿ ಏನಿರಲು ಅಪೇಕ್ಷಿಸಬಹುದು.
ನಿನ್ನೆ ಒಬ್ಬ ವಿದ್ಯಾರ್ಥಿ ತನ್ನ ಫೇಸ್ ಬುಕ್ ನಲ್ಲಿ ಕಾಲೇಜಿನ ಒಂದು ಚಿತ್ರವನ್ನು ಅಪ್ ಲೋಡ್ ಮಾಡಿದ್ದ. ಅದನ್ನು ನೋಡಿ ನನಗೆ ತುಂಬಾ ಬೇಸರವಾಯ್ತು. ನಮ್ಮ ಸುತ್ತಮುತ್ತ ಬಿದ್ದ ಕಸವನ್ನು ಗುಡಿಸಲು ನಮಗೆ ಬೇಕಿಲ್ಲದಿದ್ದರೆ ನಾವು ಬದುಕಿರುವುದು ಮಹಾ ಪಾಪ. ಗುಡಿಸಲು ಕೆಲವರು ಪ್ರಯತ್ನಿಸಲು ತೊಡಗಿದರೂ ಅದನ್ನು ಹೊತ್ತುಕೊಳ್ಳಲು ನಯಕತ್ವಕ್ಕೆ ಬದ್ಧತೆ ಬೇಕಲ್ಲವೇ.
ಈ ಚಿತ್ರವನ್ನು ಇಂದು ಮುದ್ರಿಸಿ ಪ್ರೊ.ಪ್ರಮೋದ್ ಆರ್ ಮುತಾಲಿಕ್ ಅವರಿಗೆ ತೋರಿಸಿದೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯ ಕೇಳಿ ನನಗೆ ಶಾಕ್ ಆಯಿತು. ಯಾರು ಆ ಹುಡುಗ. ಮೊದಲು ನಮಗೆ ತಿಳಿಸದೇ ಅವನು ಹೇಗೆ ಫೇಸ್ ಬುಕ್ ನಲ್ಲಿ ಈ ಚಿತ್ರ ಅಪ್ ಲೋಡ್ ಮಾಡಿದ. ಅವನನ್ನು ಕರೆಸಿ ಕೇಳಬೇಕು. ಎಂದರು. ನಾನು ಆಗ, ನೀವು ಕಳ್ಳನಿಗೆ ಶಿಕ್ಷಿಸುವ ಬದಲು ಪೋಲೀಸ್ ಗೆ ಶಿಕ್ಷೆಕೊಡುತ್ತಿದ್ದೀರಿ ಎಂದು ಹೇಳಿದೆ. ಆಗ ಅವರು ಅವನನ್ನು ಯಾರು ಪೋಲೀಸ್ ಕೆಲಸ ಮಾಡಲು ಹೇಳಿದವರು. ಹೀಗೆ ನಡೆದಿದ್ದನ್ನು ನಮಗೆ ತಿಳಿಳಿಸಬೇಕು ಎಂದರು. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇಂಥ ಮನಸ್ಸಿದ್ದರೆ ಕಾಲೇಜಿನ ಸ್ವಚ್ಛತೆ ಹೇಗೆ ಸಾಧ್ಯ.
ಇದನ್ನೇ ಮೌಳೀಶ್ ಅವರಿಗೆ ಹೇಳಿದಾಗ ಅವರ ಅಭಿಪ್ರಾಯವೇ ಬೇರೆಯದೇ ಆಗಿತ್ತು. ಈ ಚಿತ್ರದಲ್ಲಿ ಕಾಣುತ್ತಿರುವ ಹುಡುಗರನ್ನು ಕರೆದು ಎಚ್ಚರಿಕೆ ಕೊಡಬೇಕು. ಹಾಗು ನಾವು ಇನ್ನು ಮುಂದೆ ಪರೀಕ್ಷೆ ನಡೆಸುವಿಕೆಯ ಬಗೆಗೆ ಹೆಚ್ಚು ಮುತುವರ್ಜಿಯನ್ನು ವಹಿಸಬೆಕು ಎಂದರು.
ನಂತರ ಇದೇ ಚಿತ್ರವನ್ನು ಪ್ರಿನ್ಸಿಪಾಲರ ಬಳಿ ತೆಗೆದುಕೊಂಡು ಹೋದಾಗ ಅವರೂ ಕೂಡಾ ಚಿತ್ರದಲ್ಲಿ ಕಂಡ ಹುಡುಗರನ್ನು ಕರೆಸಿ ಕೇಳಬೇಕು ಎಂದರು.
ಆಗ ನಾನು, ನಮಗೆ ಇದು ಎಚ್ಚರಿಕೆಯ ಗಂಟೆಇದ್ದಂತೆ, ಈ ಹಿಂದೆ ಇಂತಹ ಘಟನೆಗಳ ಬಗ್ಗೆ ವಿದ್ಯಾರ್ಥಿಗಳೇ ದೂರು ಕೊಟ್ಟಾಗ ನಾವು ಪರೀಕ್ಷಾ ಕ್ರಮದಲ್ಲಿ ಬದಲಾವಣೆಯನ್ನು ತಂದಿದ್ದೆವು. ಈಗಲೂ ಅಂತಹದ್ದೇ ಯಾವುದಾದರೂ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಚಿತ್ರ ಪ್ರಕಟಕೊಂಡಂತೆ ಇನ್ನೂ ಹಲವಾರು ಚಿತ್ರಗಳು, ದೂರುಗಳು ಎಲ್ಲೆಲ್ಲಿಯಾದರೂ ಪ್ರಕಟಗೊಳ್ಳಬಹುದು. ಆಗ ಉತ್ತರಿಸುವುದು ಕಾಲೇಜಿಗೆ ಕಷ್ಟವಾಗುತ್ತದೆ ಎಂದು ಹೇಳಿದೆ.
Filed under: ಪ್ರತಿ ದಿನದ ಬವಣೆಗಳ ಬಣವೆ | Leave a Comment
NAAC ರಿಪೋರ್ಟ್ ಗಳೆಲ್ಲ ತಯಾರಾದವು. ಈಗ ಕವರ್ ಪೇಜ್ ಮಾಡುವ ಸರದಿ. Phot Gallery ಮಾಡಿದ್ದಾಯಿತು. ಇಂದು ಮತ್ತು ನಾಳೆ ಇದೇ ಕೆಲಸ ಆಗಿಬಿಡುತ್ತದೆ.
ಈ ಬಾರಿಯ ನಾಟಕದ ಕೆಲಸವೆಲ್ಲ ಮುಗಿದ ಮೇಲೆ ನಾಟ್ಯಶಾಸ್ತ್ರದ ಅನುವಾದಕಾರ್ಯ ಪೂರ್ಣಗೊಳಿಸಬೇಕು. ಇನ್ನೂ ಎಷ್ಟೊ ಕೆಲಸಗಳಿವೆ ಮಾಡಲು. ಒಂದೊಂದಾಗಿ ಮುಗಿಸಬೇಕು. ಮೂರನೆಯ ಸೆಮ್ ಬಿಕಾಂ ಅವರಿಗೆ ಒಂದು ನೋಟ್ಸ್ ಮುದ್ರಿಸಿಕೊಟ್ಟೆ. ಇನ್ನೂ ಎರಡು ಬರೀಬೇಕು. ಬಹುಷಃ ಈ ವಾರದಲ್ಲಿ ಮುಗಿಸಿ ಕೊಟ್ಟುಬಿಡುತ್ತೇನೆ. ಎರಡನೇ ಟೆಸ್ಟ್ ನ ಉತ್ತರ ಪತ್ರಿಕೆಗಳನ್ನೆಲ್ಲಾ ಮೌಲ್ಯಮಾಪನ ಮಾಡಿ ಕೊಟ್ಟುಬಿಟ್ಟೆ. ಇನ್ನು ಸೆಮೆಸ್ಟರ್ ಪರೀಕ್ಷೆಯ ಪ್ರಶ್ನಪತ್ರಿಕೆ ಸಿದ್ಧ ಮಾಡಬೇಕು.
ಇಂದು ರಂಗಶಂಕರದಲ್ಲಿ ತೀಜನ್ ಬಾಯಿಯ ಪಾಂಡವಾಣಿ ನೋಡಿದೆ, ಆಕೆಗೆ 65 ವರ್ಷವಂತೆ. ಅದೆಂಥಾ ಸಾಮರ್ಥ್ಯ ಆಕೆಯದು. ಕಥೆಯನ್ನು ಹೇಳುವ ಶೈಲಿಯಂತೂ ಆಕರ್ಷಕವಾಗಿದೆ. ಕಿವಿಗೆ ಒಂದು ಉತ್ತಮ ಅನುಭವ.
Filed under: ಪ್ರತಿ ದಿನದ ಬವಣೆಗಳ ಬಣವೆ | Leave a Comment
25 ಮತ್ತು 26 ಎರಡೂ ದಿನ ತೀರ ಕೆಲಸದ ಒತ್ತಡದ ದಿನ. ಕಂಪ್ಯೂಟರ್ ಬಳಿ ಕುಳಿತುಕೊಳ್ಳಲೂ ಸಮಯವಿಲ್ಲದ ದಿನಗಳು. ನಾಲ್ಕಾರು ಕೆಲಸಗಳು ಆಕ್ಷಣದಲ್ಲೇ ಮಾಡಬೇಕಾದ ಒತ್ತಡದ ಸಮಯದಲ್ಲಿ, ಯಾವುದು ಮೊದಲು ಎಂಬ ಗೊಂದಲದಲ್ಲಿದ್ದುಬಿಡುತ್ತೇವೆ. ಸಮಾನ್ಯವಾಗಿ ಯಾವ ಕೆಲಸ ಹತ್ತಿರದಲ್ಲಿ, ಕಡಿಮೆ ಪ್ರಯತ್ನದಲ್ಲಿ ಸಿಗುತ್ತದೆಯೋ ಅದನ್ನೇ ಮಾಡಲು ಪ್ರಾರಂಭಿಸುವುದು ಸಹಜ. ನಾನೂ ಇದಕ್ಕೆ ಹೊರತಲ್ಲ.
25 ರಂದು ಕೊಂದವರಾರು ನಾಟಕದ ಪ್ರಯೋಗ – ಗಾಂಧಿ ನೆಹರು ರಂಗಮಂದಿರದಲ್ಲಿ. ನಾಟಕ ಪ್ರಾರಂಭವಾಗುವವರೆಗೂ ತಿಳಿಯದ ತೊಂದರೆ ನಾಟಕ ಶುರುವಾದ ಕೂಡಲೇ ತಿಳಿದು ಆತಂಕ ಹೆಚ್ಚಾಯಿತು. ಆ ತೊಂದರೆಯನ್ನು ನೀಗಿ ಕುಳಿತುಕೊಳ್ಳುವಷ್ಟರಲ್ಲಿ ಪವರ್ ಹೋಯಿತು. ಜನರೇಟರ್ ನಲ್ಲಿ ಡೀಸೆಲ್ ಇರಲಿಲ್ಲ. ಡೀಸೆಲ್ ರಿಸರ್ ವಲ್ಲೂ ಇರಲಿಲ್ಲ. ಆಗ ಬಂಕ್ ಗೆ ಹೋಗಿ ಡೀಸೆಲ್ ತಂದು ಹಾಕಿ ನಾಟಕ ಮತ್ತೆ ಮುಂದುವರೆಯುವಹೊತ್ತಿಗೆ 15 ನಿಮಿಷಗಳು ಕಳೆದು ಹೋಗಿತ್ತು. ಮುತಾಲಿಕ್ ಬಳಿ ಈ ಅವ್ಯವಸ್ಥೆಯನ್ನು ಹೇಳಿ ಕೊಂಡಾಗ ಅವರು ಹೇಳಿದ ಮಾತು ನನ್ನನ್ನು ಚುಚ್ಚಿಬಿಟ್ಟಿತು. ’ನಾಟಕ ಮಾಡಿಸುವವರು ಮೊದಲು ಇದನ್ನು ನೋಡಿಕೋಬೇಕಾಗಿತ್ತು’ ಎಂದುಬಿಟ್ಟರು. ಹೀಗೆ ಹೇಳಿಬಿಟ್ಟರೆ ಸಂಚಾಲಕ ಎಷ್ಟು ಕೆಲಸಗಳನ್ನು ನೋಡಿಕೊಳ್ಳಲು ಸಾಧ್ಯ. ಹಾಗಾದರೆ ಕಾಲೇಜಿನ ಕಾರ್ಯಕ್ರಮಗಳು ಸುಗಮವಾಗಿ ಸಾಗೋದಿಕ್ಕೆ ಕಾಲೇಜಿನ ಆಡಳಿತ ವ್ಯವಸ್ತ್ಥೆಯ ಪಾತ್ರ ಏನೂ ಇಲ್ಲವೇ? ಇದೇ ನಮ್ಮ ಕಾಲೇಜಿನ ದುರಂತ. ಎಲ್ಲ ತೊಂದರೆಗಳಿಗೂ ತಲೆಯಮೇಲೆ ಎಳೆದುಕೊಂಡವರನ್ನು ಗುರಿಮಾಡಲಾಗುತ್ತದೆ.
ನ್ತಾಟ್ದಕ ತಂಡದ ಕೆಲವು ಫಟಿಂಗರು ತಪ್ಪುಗಳನ್ನು ಮಾಡಿ ನಾಟಕದ ಸತ್ವವನ್ನು ಕೆಡಿಸಿಬಿಟ್ಟರು. ನನಗಂತೂ ಈ ದಿನ ತುಂಬ ಬೇಸರ ತಂದ ದಿನ.

26 ರಂದು ಜ್ಞಾನಭಾರತಿ ಪಾರಿತೋಷಕ ಸ್ಪರ್ಧೆಯ ಬಹುಮಾನ ವಿತರಣೆಯ ದಿನ. ನನಗಂತೂ ನಮ್ಮ ನಾಟಕಕ್ಕೆ ಬಹುಮಾನದ ಸಾಧ್ಯತೆ ಇಲ್ಲ ಎಂದೇ ಎನಿಸಿತ್ತು. ಅಂತೆಯೇ ಆಯಿತು. ವಿದ್ಯಾರ್ಥಿಗಳು ಬೇಸರ ಹೊಂದಿದ್ದರು. ಸಹಜವೇ. ಇಂತಹ ಸಂದರ್ಭಗಳು ಆಗಾಗ ಅನುಭವಕ್ಕೆ ಬಂದಿದೆ.
27 ರಂದು, ಇವತ್ತು ತುಂಬಾ ನಿದ್ದೆ ಮೂಡ್, ಮೂರು ತರಗತಿಗಳು. 3 ನೇ ಸೆಮ್ ಬಿಕಾಂ ವಿದ್ಯಾರ್ಥಿಗಳಿಗಾಗಿ ರಾಮಾಯಣದಲ್ಲಿ ವಾಣಿಜ್ಯ ವಿಷಯದ ನೋಟ್ಸ್ ತಯಾರು ಮಾಡಿ ಕೊಟ್ಟೆ. ಮೊದಲ ಬಿಕಾಂ ವಿದ್ಯಾರ್ಥಿಗಳಿಗೆ ಎಲ್ಲ ಪಾಠಗಲೂ ಮುಗಿದವು. ಇನ್ನು 3 ನೇ ಸೆಮ್ ಬಿ.ಎ.ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳು ಇನ್ನೂ ಬೇಕಾಗುತ್ತವೆ. ಹೆಚ್ಚು ಅಂದರೆ ಬಿ.ಸಿ.ಎ. ತರಗತಿಗೆ ಇನ್ನೂ 5 ಕ್ಲಾಸ್ ಬೇಕಾಗುತ್ತದೆ. ಮುಂದಿನ ವಾರದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು.
Filed under: ಪ್ರತಿ ದಿನದ ಬವಣೆಗಳ ಬಣವೆ | Leave a Comment
ಎಲ್ಲ ಕಾಲೇಜುಗಳಲ್ಲೂ ಟೆಸ್ಟ್, ಎಗ್ಸಾಮ್, ಪ್ರೆಪರೇಟರಿ, ಲ್ಯಾಬ್ ಟೆಸ್ಟ್, ಹೀಗೇ ಹುಡುಗರೆಲ್ಲ ಅಕೆಡೆಮಿಕಲಿ ತುಂಬ ಬಿಜಿ. ನಾಟಕಸ್ಪರ್ಧೆಗೆ ಈ ಬಾರಿ ಖಳೇನೇ ಇಲ್ಲ. ಇವತ್ತು ಎ.ಎಸ್.ಸಿ ಕಾಲೇಜಿನ ಹುಡುಗರು ನಾಟಕ ಮಾಡಬೇಕಾಗಿತ್ತು ಬರಲಿಲ್ಲ. ಕಾರಣ ಎಗ್ಸಾಮ್.
ನಾಳೆ ನಮ್ಮ ಕಾಲೇಜಿನಲ್ಲೇ ನಮ್ಮ ಕಾಲೇಜಿನ ನಾಟಕ ’ಕೊಂದವರಾರು’ ಪ್ರದರ್ಶನ. ದಿನವಿಡೀ ರಿಹರ್ಸಲ್. ಇನ್ನೂ ಕಳೆದ ವಾರ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ವಾಲ್ಯೂ ಮಾಡಬೇಕು. ಶನಿವಾರಾ ನೇ ಪ್ರಥಮ ಬಿ.ಕಾಮ್ ಹುಡುಗರಿಗೆ ಕೊಟ್ಟುಬಿಟ್ಟೆ. ಇನ್ನೊ ಮೂಉ ತರಗತಿಯದ್ದಿದೆ. ನಾಳೆ ಮಾಡಬೇಕು.
ಪ್ರಥಮ ಬಿ ಕಾಂ ವಿದ್ಯಾರ್ಥಿಗಳು ಕಳೆದವರ್ಷವಾಗಲೀ ಈವರ್ಷವಾಗಲೀ ಗಂಭೀರವಾದ ವಿದ್ಯಾರ್ಥಿಗಳಂತೆ ಕಾಣುವುದಿಲ್ಲ. ಪಾಠದಲ್ಲಿ ಕಾಣಸಿಗುವ ಕಥೆಯ ತೆಳು ಪದರದಷ್ಟು ವಿವರಮಾತ್ರ ತಿಳಿದು ಯಾವುದೇ ಪ್ರಶ್ನೆಗೆ ಉತ್ತರವಾಗಿ ಬರೆಯುತ್ತಾರೆ. ಅವರಲ್ಲಿ ಒಬ್ಬಿಬ್ಬರು ಗಂಭೀರ ವಿದ್ಯಾರ್ಥಿಗಳು ದೊರೆಯುತ್ತಾರಾದರೂ ಅವರೂ ಸಹ ಪ್ರಶ್ನೆಗಳಿಗೆ ಉತ್ತರಿಸುವ ಉತ್ತಮ ವಿಧಾನವನ್ನು ಅಳವಡಿಸಿಕೊಳ್ಳುವುದಿಲ್ಲ. ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ನೇರವಾಗಿ ಕೊಟ್ಟು, ಅದೇ ಪ್ರಶ್ನೆಗಳನ್ನು ಕೇಳಿದರೆ ಅರ್ಧದಷ್ಟಾದರೂ ಬರೆಸಿದ್ದನ್ನು ಪುನರಾವರ್ತಿಸುತ್ತಾರೆ ಅಷ್ಟೇ. ಇನ್ನೂ ಪ್ರೌಢಶಾಲೆಯಲ್ಲಿ ಕಲಿಯುವ ಮಾದರಿಯಲ್ಲಿಯೇ ಕಲಿಯುತ್ತಿದ್ದಾರೆ ಅನಿಸುತ್ತದೆ. ಇದಕ್ಕೆ ಕಾರಣ ಪು ಮಟ್ಟದ ಪಾಠಪ್ರವಚನಗಳ ಕ್ರಮ ಎಂದೇ ನನ್ನ ಅನಿಸಿಕೆ.
ಪಿಯು ಮಟ್ಟದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣ ಮುಂದಿಟ್ಟು ಒಂದು ಮಾರ್ಕಿನ, ಎರಡು ಮಾರ್ಕಿನ ಮೂರು ಮಾರ್ಕಿನ ಐದು ಮಾರಿಕ ಪ್ರಶ್ನೆಗಳಾಗಿ ವಿಭಜಿಸಿದ ಫಲಿತಾಂಶವಿದು. ನೋಟ್ಸ್ ನ್ನೇ ಅವಲಂಬಿಸಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಸ್ವಂತ ತಿಳುವಳಿಕೆ, ಹೆಚ್ಚಿನ ವಿಷಯದ ಅರಿವು. ಪ್ರಶ್ನೆಯನ್ನು ಅರ್ಥಮಾಡಿಕೊಂಡು ಪ್ರಬಾಂಧವನ್ನು ಬರೆಯುವ ಶೈಲಿ ಯಾವುದರಲ್ಲಿಯೂ ಆಸಕ್ತಿಯಿಲ್ಲದಂತೆ ಕಾಣುತ್ತಾರೆ. ಇನ್ನೂ ಬಿ.ಎ.ಬಿ.ಎಸ್ಸಿ ವಿದ್ಯಾರ್ಥಿಗಳು ಮೇಲು. ಬಿ.ಸಿ.ಎ ವಿದ್ಯಾರ್ಥಿಗಳಲ್ಲಿಯೂ ಕೆಲವರು ಮಾತ್ರ ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಕಾಣಸಿಗುತ್ತಾರೆ.
Filed under: Uncategorized | Leave a Comment
ಇಂದು ವಾಲ್ಮೀಕಿ ಜಯಂತಿ. ಈ ವರ್ಷದಿಂದ ವಾಲ್ಮೀಕಿ ಜಯಂತಿಯಂದು ಶಾಲಾ ಕಾಲೇಜಿಗೆ ರಜೆ. ಇದು ಅನುಭವಿಸುವ ರಜೆಯಲ್ಲ, ಆಚರಣೆಯ ರಜೆ.
ರಾಮಾಯಣ ಬರೆದಿದ್ದು ಹೌದು. ಬರೆದವನೂ ಇದ್ದಿರಬಹುದು ಹೌದು. ವಾಲ್ಮೀಕಿ ಎಂಬ ಹೆಸರಿನಬಗ್ಗೆಯೇ ತಕರಾರುಗಳು, ಅನುಮಾನಗಳು, ಹುಡುಕಾಟಗಳು, ವಿಶ್ಲೇಷಣೆಗಳು ಪುಂಖಾನುಪುಂಖವಾಗಿವೆ. ನಿಷ್ಕರ್ಷೆ ಇಲ್ಲ. ಕಳೆದ 3000 ವರ್ಷಗಳಿಗೂ ಹೆಚ್ಚು ಕಾಲ ರಾಮಾಯಣ ಕಥೆಯ ಬಗ್ಗೆ ಪ್ರೀತ್ಯಾದರ ತೋರಿ ತಮ್ಮ ತಿಳಿವನ್ನು ಕಥೆಗೆ ಧಾರೆ ಎರೆದ ನೂರಾರು ವಾಲ್ಮೀಕಿಗಳಿದ್ದಾರೆ ಎಂದು ರಾಮಾಯಣದಲ್ಲಿನ ಪ್ರಕ್ಷೇಪಗಳ ಬಗ್ಗೆ ತಿಳಿಸಿದ ವಿದ್ವಾಂಸರುಗಳ ವಾದವನ್ನು ಗೌರವಿಸಿದರೆ ನೂರಾರು ವಾಲ್ಮೀಕಿಗಳ ಜನ್ಮದಿನಾಂಕಗಳಂದು ಜಯಂತಿಗಳನ್ನು ಆಚರಿಸಬೇಕಾಗುತ್ತದೆ. ಮೂಲ ಕಲ್ಪನೆಯ ಒಬ್ಬ ಲೇಖಕನಿಗೆ ಗೌರವಕೊಡುವುದಾದರೆ ಅವನ ಜನ್ಮದಿನದ ನಿಖರತೆ ಪ್ರಶ್ನೆ ಇದೆ. ಹೀಗೆಲ್ಲಾ ಪುರಾಣಪುರುಷರ ಜನ್ಮದಿನವೆಂದು ನಾನ್ವು ನಮ್ಮ ಸಮಯವನ್ನು ವ್ಯರ್ಥಮಾಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಅಭಿವೃದ್ಧಿ ಎಂದರೆ ಕಟ್ಟಡಗಳಲ್ಲ, ಶ್ರದ್ಧೆಯಿಂದ ಕೆಲಸಮಾಡುವ ಮನಸ್ಸು, ಕೆಲಸದಲ್ಲಿ ಯಶಸ್ಸುಗಳಿಸುವ ಕಟಿಬದ್ಧತೆ.
ಇವತ್ತು ರಜೆಯ ಕಾರಣ ನಾಟಕದ ರಿಹರ್ಸಲ್ ಗೆ ಅನುಕೂಲ ಆಯ್ತು, 1 ಗಂಟೆಯಿಂದ 5 ಗಂಟೆಯವರೆಗೆ, ರಿಹರ್ಸಲ್ ಮಾಡಿದರು, ನಾನು ಮಧ್ಯಾಹ್ನನೆ ಹಿಂತಿರುಗಿ ಬಂದು ನಿದ್ದೆಮಾಡಿದೆ.
ನಿನ್ನೆಯ ನಾಟಕಮುಗಿದಮೇಲೆ ಮೀತ ಮಿಶ್ರ ಅವರು ಕೇಂದ್ರಸರ್ಕರದ ಕೆಲವು ಯೋಜನೆಗಳನ್ನು ಕುರಿತಂತೆ ತಿಳಿಸಿದರು. www.indiaculture.nic ವೆಬ್ ಸೈಟ್ ನ್ನು ತೆರೆದು ನೋಡಲು ಹೇಳಿದರು. ಇಂದು ಅದನ್ನು ತೆರೆದು ನೋಡಿದೆ. ನಮ್ಮ ಕಾಲೇಜಿಗೆ ಅನುದಾನ ಪಡೆದುಕೊಳ್ಳುವ ಮಾರ್ಗಗಳು ತುಂಬಾ ಇವೆ. ಪ್ರಯತ್ನಿಸಬೇಕು.
ಇಂದು ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯಂದು ಸರ್ಕಾರಿ ರಜೆ ಕೊಟ್ಟ ಬಗ್ಗೆಯೇ ಮಾತುಕತೆ. ಹೆಚ್ಚಿನ ಅಧ್ಯಾಪಕರು ರಜೆಯಿಂದ ಸಂತೋಷವಾಗಿದ್ದರೂ ಕೆಲವರು ಪಾಠಮುಗಿಸಲು ಸಾಧ್ಯವಾಗದೇಇರುವುದರ ಬಗ್ಗೆ ಚಿಂತಿಸುತ್ತಾ ರಜೆ ಕೊಟ್ಟಿದ್ದನ್ನು ಟೀಕಿಸುತ್ತಿದ್ದರು. ಯಡಿಯೂರಪ್ಪನಿಗೆ ಒಂದು ಒಂಟಿಕೊಪ್ಪಲ್ ಪಂಚಾಂಗ ಕಳಿಸಿದರೆ ಎಲ್ಲ 365 ದಿನಗಳಂದೂ ಸರ್ಕಾರೀ ರಜೆ ಘೋಷಿಸಿಬಿಡುತ್ತಾನೆ ಎಂದು ಆಡಿಕೊಳ್ಳತೊಡಗಿದರು. ಅಂತೂ ಇಂತೂ ಸರ್ಕಾರದಿಂದ ರಜೆಯ ಸುತ್ತೋಲೆ ಬಂದಿತು. ಮೌಳೀಶ್ ಅವರು ಚಿತ್ರದುರ್ಗದಿಂದ ಫೋನ್ ಮಾಡಿ ನಾಳೆ ವಾಲ್ಮೀಕಿಯ ಫೋಟೋ ಇಟ್ಟು ಕಾರ್ಯಕ್ರಮ ಮಾಡಬೇಕು. ರೆಜೆ ಇರುವುದಿಲ್ಲ ಆದರೆ ತರಗತಿಗಳನ್ನು ನಡೆಸಬೇಕಾಗಿಲ್ಲ. ಗಾಂಧಿ ಜಯಂತಿಯ ಬಗೆಯಲ್ಲಿ ವಾಲ್ಮೀಕಿ ಜಯಂತಿಯನ್ನೂ ಮಾಡಬೇಕು ಎಂದು ತಿಳಿಸಿದರು. ಆದರೆ ಸುತ್ತೋಲೆಯಲ್ಲಿ ಹಾಗೇನೂ ಇರಲಿಲ್ಲ. ಆದ್ದರಿಂದ ಬೋರ್ಡ್ ಮೇಲೆ ಬರೆದು ನಾಳಿನ ರೆಜೆಯನ್ನು ಘೋಷಿಸಲಾಯಿತು.
ನಾಳಿನ ರಜೆಯಂದು ವಿಷೇಷ ತರಗತಿಗಳು ಆಯಾ ಅಧ್ಯಾಪಕರಿಂದಲೇ ಕರೆ ಕೊಡಲಾಯ್ತು.
ನಾಳೆ ಮಧ್ಯಾಹ್ನ ೧ ಗಂಟೆಗೆ ’ಕೊಂದವರಾರು’ ನಾಟಕದ ತಾಲೀಮು ಎಂದು ಹೇಳಿ ಕಳುಹಿಸಿದೆ. ಎರಡು ದಿನ ತಾಲೀಮು ನಡೆಸಿ ಸೋಮವಾರ 25 ನೇ ತಾರೀಖಿನಂದು ಪ್ರದರ್ಶನ ಮಾದಿದರೆ ಈ ವರ್ಷದ ನಾಟಕ ತಯಾರಿ ಕಾರ್ಯಕ್ರಮ ಮುಗಿದಂತೇ ಸರಿ. ಇನ್ನೂ ಎರಡು ಪ್ರದರ್ಶನಗಳ್ನ್ನು ಕೇಳಲಾಗಿದೆ. ಅನುಕೂಲ ನೋಡಿಕೊಂಡು ನಡೆಸಬೇಕು.
Filed under: Uncategorized | Leave a Comment
ಸೆಮೆಸ್ಟರ್ ಕಾರಣ ಕಾಲೇಜಿನಲ್ಲಿ ಎಂಥಹ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳಲಾಗುವುದಿಲ್ಲ. NAAC ರಿಪೋರ್ಟಲ್ಲಿ ಕಾಲೇಜಿನಲ್ಲಿ ನಡೆಸಲಾದ ಶೈಕ್ಷ ಣಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾದ ವಿವರ ಕೊಡುವುದು ಅಗತ್ಯ. ಆದರೆ ಎಷ್ಟು ಮಾಡಲು ಸಾಧ್ಯ. ಕಾರ್ಯಕ್ರಮಗಳನ್ನೇನೋ ಮಾಡಬಹುದು. ಪಾಲ್ಗೊಳ್ಳಲು ವಿದ್ಯಾರ್ಥಿಗಳನ್ನು ಕರೆತರುವುದು ಹೇಗೆ? ಕಾಲೇಜಿನ ಸಮಯದಲ್ಲಿ ಮಾಡಿದರೆ ತರಗತಿಗಳಿಗೆ ಪೆಟ್ಟು ಬೀಳುತ್ತದೆ. ನಂತರ ಮಾಡಿದರೆ ವಿದ್ಯಾರ್ಥಿಗಳು ಉಳಿಯುವುದಿಲ್ಲ. ಅದೇನೋ ತರಗತಿಯೊಳಗಿನ ಸ್ಪರ್ಧೆಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ. ಆಸಕ್ತಿ ಕಡಿಮೆಯಾಗಿದೆ ಎಂದರೆ ಅದು ಸರಿಯಾದ ಉತ್ತರವಾಗುವುದಿಲ್ಲ. ಆಸಕ್ತಿಯನ್ನು ಅಳಿಸಿಬಿಟ್ಟಿದ್ದೇವೆ ನಾವು ಎಂದುಕೊಳ್ಳಬೇಕೇನೋ? ನಾವು ಎಂದರೆ ಚಿಕ್ಕ ಘಟಕವಾದ ಅಧ್ಯಾಪಕನಿಂದ ಹಿಡಿದು, ದೊಡ್ಡ ಘಟಕವಾದ ಸರ್ಕಾರದವರೆಗೂ ಅನ್ವಯಿಸುತ್ತದೆ.
ಡಾ.ಎಚ್.ಎನ್ ನೆನಪಿನ ಅಂತರಕಾಲೇಜು ನಾಟಕಸ್ಪರ್ಧೆಯ 3 ನೆಯ ದಿನ ಇಂದು ಮಹಾರಾಣಿ ಕಲೆ, ವಾಣಿಜ್ಯ ಮತ್ತು ನಿರ್ವಹಣೆಯ ಕಾಲೇಜಿನ ವಿದ್ಯಾರ್ಥಿನಿಯರು ಅಭಿನಯಿಸಿದ ನಾಟಕ ’ ರೆಕ್ಕೆ ಕಟ್ಟುವಿರಾ” . ಅಣು ಸಮರದ ಭೀತಿಯನ್ನು ಹಂಚುವ ಈ ನಾಟಕ, ಮಾನವ ನಿರ್ಮಿತ ದುರಂತದ ಚಿತ್ರವನ್ನು ಗಾಢ ಬಣ್ಣಗಳೊಡನೆ ಕುಂಚದಲ್ಲಿ ರಚಿಸಿದಂತೆ ಭಾವನೆಗಳಲ್ಲಿ ಕಟ್ಟಿಕೊಟ್ಟಿರುವ ಲೇಖಕರುಗಳು ಶ್ಲಾಘನೀಯರೇ. ನಾಟಕದ ಕೊನೆಯ ದೃಶ್ಯ ಯುದ್ಧವನ್ನು ದ್ವೇಶಿಸುವಂತೆ ಚಿತ್ರಿಸಲಾಗಿದೆ. ಹೀಗೆ ಚಿತ್ರಿಸುವುದು ಒಂದು ಬಗೆಯಲ್ಲಿ ಕಲಿತ ಕುಸುರಿಯ ದಾರಿಯಲ್ಲಿ- ಸರಿಯೇ. ಎಂದೋ ಕಂಡ ಮನುಷ್ಯನ ನೋವಿಗೆ ಇಂದು ಅದೇ ಮಾತುಕೊಟ್ಟಂತೆ ಇದೆ. ಅಂದರೆ, ಈ ಹಿಂದೆ ಚರ್ನೋಬಿಲ್, ಭೂಪಾಲ್ ಗಳು ನಮ್ಮ ಬೆನ್ನಿಗಿರುವಾಗ, ಸುಖ ಎಂಬುದು ಕನಸು ಎಂಬ ಪದಕ್ಕೆ ಪರ್ಯಾಯವಾಗಿರುವಾಗ, ಭಾವನಾತ್ಮಕವಾಗಿ ಉತ್ತರ ಹುಡುಕ ಹೊರಟರೆ ಸುಳ್ಳನ್ನೇ ಗಾಢವಾಗಿ ಕಟ್ಟಿಕೊಡುತ್ತಿರುತ್ತೇವೆ ಎಂದು ನನಗನಿಸುತ್ತದೆ. ಸಹನೆ, ವಿವೇಕದ ಜೊತೆಯಲ್ಲಿ ವಿಜ್ಞಾನದ ದಾರಿಯನ್ನು ಅರಸುತ್ತಾ ಹೋದರೆ, ಇಂದು ನಾವಾಡುವ (ಹುಚ್ಚು) ಮಾತುಗಳು ನಾಳಿನ ದೀಪಗಳಾಗಬಹುದಲ್ಲವೇ. ಹಳ ಹಳಿಸುವುದನ್ನು ತೊರೆದು ದೀಪ ಹಿಡಿಯುವ ಹುಚ್ಚುತನ ಬೇಕೆನಿಸುತ್ತದೆ. ಇಂದು ಪ್ರಯೋಗಿಸುವಾಗ ನಾಟಕವನ್ನು ಬದಲಾಯಿಸಬೇಕಾಗುತ್ತದೆ.
ನಾಟಕಗಳು – ಆಯಾ ಕಾಲದ ಬಿಸಿಲು, ಬೆಳದಿಂಗಳುಗಳು. ಎಲ್ಲ ಕಾಲಕ್ಕೂ ಬಿಸಿಲು ಬೆಳದಿಂಗಳುಗಳು ಅಂತೆಯೇ ಕಂಡರೂ, ಅದನ್ನು ಅನುಭವಿಸುವುದು ಮಾತ್ರ ಅಂದಂದಿನ ನೆಮ್ಮದಿಗಳ ಬಯಲಲ್ಲಿಯೇ ಎಂಬುದನ್ನು ಕಂಡುಕೊಳ್ಳಬೇಕು.
ಅಂದಿನ ನಾಟಕಕ್ಕೆ ಇಂದಿನ ನೆಮ್ಮದಿಯ ಬಯಲನ್ನು ತೋರಿಸಬೇಕಾಗುತ್ತದೆ. ಆಗ ಅದು ಸಮಾಜವನ್ನು ಬಿಟ್ಟಕಣ್ಣಲ್ಲಿ ನೋಡಿದಂತಾಗುತ್ತದೆ.
ನಾಟಕಕಾರ ಬರೆದಿದ್ದನ್ನೇ ಹಾಗೇ ಎಂದೆಂದಿಗೂ ಪ್ರಯೋಗಕ್ಕೆ ಒಳಪಡಿಸುತ್ತಾ ಬಂದರೆ, ನೆಮ್ಮದಿಗಳ ಕರೆನ್ಸಿ ಬದಲಾದಂತೆ ಬದುಕಿನ ಟೊಳ್ಳುತನ ರಾಚುತ್ತದೆ.
ನಾಟಕ ಪ್ರದರ್ಶನ ಎಂದೆಂದಿಗೂ ಕೂಡಾ ಅಂದಂದಿಗೆ ಮಾಡಿಕೊಳ್ಳುವಂಥಾದ್ದೇ ಎಂದೇ ನನ್ನ ತಿಳಿವು ಹಾಗು ನಂಬಿಕೆ.
- ಇಂದು ಎರಡನೇ ಇನ್ಟರ್ನಲ್ ಟೆಸ್ಟ್ ನ ಎರಡನೆಯ ದಿನ.
- ನಾಟಕಸ್ಪರ್ಧೆಯ ಎರಡನೆಯದಿನ ಕೂಡ.
ಇಂದು ಬೆಳಿಗ್ಗೇನೇ ನಾಟಕ ಸ್ಪರ್ಧೆಯಲ್ಲಿ ಒಂದು ಬದಲಾವಣೆಯಾಯ್ತು. ಮಹಾರಾಣಿಕಾಲೇಜಿನ ಶೋಭಾ ಅವರು ತಮ್ಮ ಕಾಲೇಜಿನ ನಾಟಕವನ್ನು 20 ನೇ ತಾರೀಖಿನಂದೇ ಮಾಡುವೆವೆಂದು ಕೇಳಿಕೊಂಡರು. ಅಂದು ವಿವೇಕಾನಂದ ಕರೆಸ್ಪಾಂಡೆನ್ಸ್ ಕಾಲೇಜ್ ಪಟಾಲಮ್ಮ ಬೀದಿ, ವಿದ್ಯಾರ್ಥಿಗಳು ಬೇಹುಗಾರ ನಾಟಕ ಮಾಡಬೇಕಾಗಿತ್ತು. ಶೋಭಾ ಅವರು ವಿವೇಕಾನಂದ ಕಾಲೇಜಿನ ಸತ್ಯಜಿತ್ ಅವರೊಡನೆ ಮಾತನಾಡಿ ಒಪ್ಪಿಸಿಕೊಂಡರು. ಆದರೆ ಬದಲಾಗಿ ಸತ್ಯಜಿತ್ ಅವರು ನನಗೆ ಫೋನ್ ಮಾಡಿ ’ಸಾರ್, ನಮ್ಮ ನಾಟಕ ’ಬೇಹುಗಾರ’ ವನ್ನು ಪ್ರಯೋಗಿಸಲು ನಾಲ್ಕರಿಂದ ಐದು ಸಾವಿರ ರೂ ಬೇಕಾಗುತ್ತದೆ. ಅಷ್ಟು ಹಣ ನಮ್ಮಲ್ಲಿಲ್ಲ. ನೀವು ನಮ್ಮ ನಾಟಕವನ್ನು ಕ್ಯಾನ್ಸಲ್ ಮಾಡಿ ಆ ದಿನದ ಸಮಯವನ್ನು ಮಹಾರಾಣಿಕಾಲೇಜಿನವರಿಗೆ ಕೊಡಿ ಎಂದರು. ಆದರೆ ನಾನು ಅವರನ್ನು ಬಿಟ್ಟುಕೊಡದೆ, ನೀವು ಬೇರೆ ಯಾವುದಾದರೂ ನಾಟಕವನ್ನು ಮಾಡಿ 21 ನೇ ತಾರೀಖಿನಂದು ಮಾಡಿ ಎಂದು ಹೇಳಿದೆ. ಅವರು ಒಪ್ಪಿ 21 ರಂದು ಸಂಜೆ 6 ಗಂಟೆಗೆ ’ಅಪ್ಪ’ ಎಂಬ ನಾಟಕ ಮಾಡುತ್ತೇವೆಂದು ತಿಳಿಸಿದರು.
ಇವತ್ತು ಸರ್ಕಾರಿ ಆರ್ ಸಿ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪದಿಸುವ ನಾಟಕ ’ಒಂದು ಪಯಣದ ಕಥೆ,
ಇಂದಿನಿಂದ ಎರಡನೆಯ ಆಂತರಿಕ ಪರೀಕ್ಷೆಗಳು ನಡೆಯುತ್ತಿವೆ. ಡಾ. ಎಚ್.ಎನ್. ನೆನಪಿನ 5ನೆಯ ಅಂತರಕಾಲೇಜು ನಾಟಕಸ್ಪರ್ಧೆಯೂ ಪ್ರಾರಂಭವಾಗುತ್ತಿದೆ.
ಎಲ್ಲಕ್ಕೂ ಸಮಯ ಹೊಂದಿಸುವುದು ಈ ಸೆಮೆಸ್ಟರ್ ಕಾಲದಲ್ಲಿ ಕಷ್ಟ. ವಿದ್ಯಾರ್ಥಿಗಳಿಗೂ ಆತಂಕ, ಅಧ್ಯಾಪಕರಿಗೂ ಅವಸರ. ಕೆಲಸ ನೂರರಷ್ಟು ಉತ್ತಮ ಎನ್ನಿಸಿಕೊಳ್ಳಲು ಅವಕಾಶವೇ ದೊರೆಯುವುದಿಲ್ಲ. ಹೇಗೋ ಕೆಲಸ ಮುಗಿದರೆ ಸಾಕು ಎಂಬಂಥ ಧೋರಣೆಯಲ್ಲೇ ಹೆಚ್ಚು ಕೆಲಸಗಳು ನಡೆಯುತ್ತವೆ.
ಇದು ಎಲ್ಲ ಕಾಲೇಜುಗಳ ಕಥೆ.
ಇಂದು ಅಂತರ ಕಾಲೇಜು ಕನ್ನಡ ನಾಟಕ ಸ್ಪರ್ಧೆಯ ಉದ್ಘಾಟನೆ. ಡಾ.ವಿಜಯಾ ಅವರು 5.30ಕ್ಕೇ ಬಂದರು. 6ಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಿಸಿದೆವು. ಡಾ. ವಿಜಯಾ ಅವರು ಕಾಯಕ್ರಮ ಉದ್ಘಾಟಿಸುತ್ತಾ, ತಮ್ಮ ಹಾಗು ಡಾ.ಎಚ್.ಎನ್ ಅವರ ಭೇಟಿಗಳನ್ನು ಮೆಲುಕು ಹಾಕಿದರು. ತಾವು ಎ.ಪಿ.ಎಸ್. ಸಂಜೆ ಕಾಲೇಜಿನಲ್ಲಿ ಓದುತ್ತಿದ್ದಾಗ ಪಾಲ್ಗೊಳ್ಳುತ್ತಿದ್ದ ನಾಟಕ ಸಂಗೀತಗಳು ನನಗೆ ಧೈರ್ಯ ಕಲಿಸಿತು. ಕಾಲೇಜಿನಲ್ಲಿ ರಂಗಭೂಮಿಯನ್ನು ಬಹಳ ವರ್ಷಗಳಿಂದ ಪ್ರಮುಖ ಕಾರ್ಯಕ್ರಮವಾಗಿ ನಡೆಸುತ್ತಾ ಉಳಿಸಿಕೊಂಡು ಬರುತ್ತಿರುವುದು ನ್ಯಾಷನಲ್ ಕಾಲೇಜಿನ ಪರಂಪರೆಯಾಗಿದೆ. ಡಾ.ಎಚ್.ಎನ್ ರವರ ನಾಟಕ ಪ್ರೀತಿ ನೂರಾರು ಪ್ರತಿಭಾನ್ವಿತ ಕಲಾವಿದರುಗಳನ್ನು ಹುಟ್ಟುಹಾಕಿದೆ, ಎಂದರು. ಕಾಲೇಜಿನ ಪ್ರಿನ್ಸಿಪಾಲರಾದ ಡಾ.ಎಂ.ಲೀಲಾವತಿ ಅವರು ನಾಟಕಸ್ಪರ್ಧೆಯ ವಿವರಗಳನ್ನು ನೀಡಿ ಈ ವರ್ಷದ ಎಲ್ಲ ಸ್ಪರ್ಧಿಗಳಿಗೂ ಶುಭಹಾರೈಸಿದರು. ಕಾಲೇಜಿನ ಅಧ್ಯಾಪಕ ಮಂಡಳಿ ಸದಸ್ಯರಾದ ಪ್ರೊ. ಪ್ರಮೋದ್ ಆರ್ ಮುತಾಲಿಕ್ ಅವರು ವಂದನಾರ್ಪಣೆ ಮಾಡಿದರು. ಸ್ಪರ್ಧೆಯ ಮೊದಲ ನಾಟಕ ’ಭಗವದಜ್ಜುಕೀಯ’ ಕೆ.ಆರ್.ಪುರಮ್.ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಬಾಲಕ ಬಾಲಕಿಯರು ಅಭಿನಯಿಸಿದರು.
ನಾಳೆ ಡಾ.ಹೆಚ್.ಎನ್.ನೆನಪಿನ 5ದನೆಯ ವರ್ಷದ ಅಂತರ ಕಾಲೇಜು ನಾಟಕ ಸ್ಪರ್ಧೆ. ಒಟ್ಟು 8 ಪ್ರವೇಶಗಳು. ಇವುಗಳನ್ನು ಪಡೆಯಲು ಈ ಬಾರಿ ಹರಸಾಹಸ ಮಾಡಬೇಕಾಯಿತು. ಎಲ್ಲ ಕಾಲೇಜುಗಳಲ್ಲೂ ಆಂತರಿಕ ಪರೀಕ್ಷೆಗಳು ನಡೆಯುತ್ತಿವೆ. ಸಂಜೆ ನಾಟಕ ಪ್ರದರ್ಶನ ವೆಂದರೆ ಕೆಲವು ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಬರುವುದಿಲ್ಲ. ಹೀಗಾಗಿ ಈ ಬಾರಿ ನಮ್ಮ ಸ್ಪರ್ಧೆಗೆ ಪ್ರವೇಶಗಳ ಕೊರತೆ ಬಿದ್ದಿದೆ.
ನಮ್ಮ ರಂಗಮಂದಿರದಲ್ಲಿ ಬೆಳಕಿನ ವ್ಯವಸ್ಥೆ ಸಾಲದು. ಕೆಲವು ಬಲ್ಬ್ ಗಳು ಹಾಳಾಗಿವೆ. ಕೆಲವು ಲೈಟ್ಸ್ ಗಳು ಹಳೆಯದಾಗಿವೆ. ಹೊಸ ಬೆಳಕಿನ ವ್ಯವಸ್ಥೆ ನಿರ್ಮಿಸಲು ಹೆಚ್ಚು ಹಣ ಬೇಕಾಗುತ್ತದೆ. ಎಲ್ಲಿಂದ ತರೋದು? ಒಟ್ಟಿನಲ್ಲಿ ಬಡತನದ ಪ್ರದರ್ಶನವಾಗುತ್ತಿದೆ.
ಅಧ್ಯಾಪಕರಿಗೆಂದೇ ಎಂದು ಹೇಳಿಕೊಂಡಿರುವ ಈ ಬ್ಲಾಗ್ ನ್ನು ಅಧ್ಯಾಪಕನಾಗಿ ವಿದ್ಯಾರ್ಥಿಗಳೊಂದಿಗಿನ ನನ್ನ ದೈನಂದಿನ ಅನುಭವಗಳನ್ನು ದಾಖಲಿಸಲು ಮಾಡಿಕೊಂಡೆ. ಆಗಾಗ ನನ್ನ ನಹ ಅಧ್ಯಾಪಕರು ನನಗೆ ದಾರಿತೋರಿರುವುದನ್ನೂ ದಾಖಲಿಸಲು ಇದನ್ನು ಬಳಸುತ್ತೇನೆ. ಇಲ್ಲಿರುವುದೆಲ್ಲ ನನ್ನ ಸ್ವಂತ ಅಭಿಪ್ರಾಯಗಳು. ಇಲ್ಲಿ ನಾನು ಬರೆಯುವುದೆಲ್ಲ ಸತ್ಯ. ಸುಳ್ಳನ್ನು ಬರೆಯಲು ನನಗೆ ಸಾಧ್ಯವಿಲ್ಲ.
- ಭಗವದ್ಗೀತೆ
Welcome to your brand new blog at Edublogs.
To get started, simply log in, edit or delete this post and check out all the other options available to you.
Also, if not already, please consider becoming an Edublogs Pro User – you can remove ads from yours and 50 other student blogs (which also get extra themes and mobile blogging), upload up to 10GB or audio, video and every other sort of content and access great features under your ‘Plugins’ menu.
And you get premium email support and over 130 extra cool themes too.
Pro users are what keeps Edublogs running and providing free blogs for education, so give it a go today
For assistance, visit our comprehensive support site, check out our getting started with Edublogs guide or stop by The Edublogs Forums to chat with other edubloggers.
You can also subscribe to our brilliant free publication, The Edublogger, which is jammed with helpful tips, ideas and more.
And finally, if you like Edublogs but want to be able to simply create, administer, control and manage hundreds of student and teacher blogs at your school or college, check out Edublogs Campus… it’s like Edublogs in a box, all for you.
Thanks again for signing up with Edublogs!







